ಮಿಡಿಗೇಶಿ
ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನಲ್ಲಿ ಕಸಬೆಯಿಂದ 19 ಕಿಮೀ ಉತ್ತರಕ್ಕೆ ಮಡಕ ಶಿರಾಕ್ಕೆ ಹೋಗುವ ಮಾರ್ಗದ ಬದಿಯಲ್ಲಿ ? ಪೂರ್ವದ ಇಳಿಜಾರಿನಲ್ಲಿರುವ ಒಂದು ಗ್ರಾಮ. ಇದೇ ಹೆಸರಿನ ಹೋಬಳಿಯ ಮುಖ್ಯಸ್ಥಳ.

	ಇದೊಂದು ಪಾಳೆಯಪಟ್ಟಿನ ಕೇಂದ್ರವಾಗಿತ್ತು. ಇಲ್ಲಿ ಪಾಳೆಯಗಾರನಾಗಿದ್ದ ನಾಗರೆಡ್ಡಿ ಎಂಬಾತ ತನ್ನ ಸುಂದರ ಪತ್ನಿಯ ತಲೆಕೂದಲು ಮಿಡಿಯ (ಹಿಮ್ಮಡಿ) ವರೆಗೂ ಇದ್ದ ಸಂಗತಿಯ ಸ್ಮರಣಾರ್ಥವಾಗಿ ತನ್ನ ರಾಜಧಾನಿಗೆ ಮಿಡಿಗೇಶಿ ಎಂದು ನಾಮಕರಣ ಮಾಡಿದುದಾಗಿ ಐತಿಹ್ಯವಿದೆ. ಅವನೇ ಬೆಟ್ಟದ ಸುತ್ತ ಸುಭದ್ರಕೋಟೆ ಕಟ್ಟಿಸಿದನೆಂದು ಹೇಳಲಾಗಿದೆ. ಅವನ ಕಾಲ ನಿರ್ಣಯಕ್ಕೆ ಹೆಚ್ಚಿನ ಆಧಾರಗಳಿಲ್ಲ. ಬಹುಶಃ ಅವನು 14-15ನೆಯ ಶತಮಾನದಲ್ಲಿ ಆಳುತ್ತಿದ್ದಿರಬಹುದು. 1678-79ರವೇಳೆಗೆ ಮೈಸೂರಿನ ಚಿಕ್ಕದೇವರಾಜ ಒಡೆಯರ ದಳವಾಯಿ ದೇವರಾಜ ಮಧುಗಿರಿಯ ನಾಯಕರಾದ ತಿಮ್ಮಪ್ಪಗೌಡ ಮತ್ತು ಮಿಡಿಗೇಶಿಯನ್ನು ವಶಪಡಿಸಿಕೊಂಡ. ಶಹಾಜಿಯ ಹಿರಿಯಮಗ ತಂಜಾವೂರಿನಲ್ಲಿ ಆಳುತ್ತಿದ್ದ ವೆಂಕೋಜಿ ಅಥವಾ ಏಕೋಜಿಯ ಸೈನ್ಯ ಯಶವಂತರಾಯನ ನೇತೃತ್ವದಲ್ಲಿ ಈ ಪ್ರದೇಶವನ್ನು ಆಕ್ರಮಿಸಿಕೊಂಡರೂ ಅಲ್ಪಾವಧಿಯಲ್ಲೇ ಮತ್ತೆ ಮೈಸೂರು ಸೈನ್ಯ ಮರಾಠರನ್ನು ಹೊಡೆದೋಡಿಸಿತು. ಅದೇ ಸುಮಾರಿನಲ್ಲಿ ಬಿಜಾಪುರ ಸುಲ್ತಾನರ ಸೈನ್ಯ ಈ ಪ್ರದೇಶದ ಮೇಲೆ ದಾಳಿ ನಡೆಸಿದಾಗ ಚಿಕ್ಕದೇವರಾಜ ಅವರನ್ನು ಹೊಡೆದೋಡಿಸಿ ಈ ಪ್ರದೇಶದ ಮೇಲೆ ತಮ್ಮ ಅಧಿಕಾರವನ್ನು ಭದ್ರಗೊಳಿಸಿದ. ಆ ಸಮಯದಲ್ಲಿ ಮಧುಗಿರಿಯ ಪಾಳೆಯಗಾರರಿಗೆ ಮಿಡಿಗೇಶಿಯನ್ನು ಬಿಟ್ಟುಕೊಡಲಾಯಿತು. ಹೈದರ್ ಅಲಿ 1761ರಲ್ಲಿ ಮಿಡಿಗೇಶಿಯನ್ನು ಗೆದ್ದುಕೊಂಡ. 1767ರಲ್ಲಿ ಮರಾಠರ ದಳಪತಿ ಮಾಧವರಾಯ ಈ ಸ್ಥಳವನ್ನು ವಶಪಡಿಸಿಕೊಂಡರೂ 1774ರ ವೇಳೆಗೆ ಟಿಪ್ಪು ಮಧುಗಿರಿ. ಮಿಡಿಗೇಶಿಗಳನ್ನು ಪುನಃ ಆಕ್ರಮಿಸಿಕೊಂಡ. ಆದರೆ ಮರಾಠರ ಸೋತು ಓಡುವ ಮುನ್ನ ಮಿಡಿಗೇಶಿಯನ್ನು ಲೂಟಿ ಮಾಡಿ ಪಾಳುಗೆಡವಿದರು. ಮೂರನೆಯ ಮೈಸೂರು ಯುದ್ಧದ ಸಮಯದಲ್ಲಿ ಕಾನವಾಲೀಸನ ಆಕ್ರಮಣದ ಅನಂತರ ಚಿಕ್ಕಪ್ಪಗೌಡನ ವಂಶಸ್ಧರು ಇಲ್ಲಿ ನೆಲಸಿದರು. ಮತ್ತೆ ಟಿಪ್ಪುಸುಲ್ತಾನನ ದಂಡನಾಯಕ ಕಮ್ರುದ್ದೀನನ ದಾಳಿಯಿಂದ ಅವರು ಇಲ್ಲಿಂದ ಹೊರಬೀಳುವಂತಾಯಿತು. ಮುಸ್ಲಿಮರ ಆಳ್ವಿಕೆಯಲ್ಲಿ ಇದು ಅಸೋಫ್ ಎಂಬ ಅಧಿಕಾರಿಯ ವಾಸಸ್ಥಳವಾಗಿತ್ತು. ಅನಂತರ ಮೈಸೂರು ರಾಜ್ಯದಲ್ಲಿ ಲೀನವಾಗಿ ತಾಲ್ಲೂಕಿನ ಕೇಂದ್ರವಾಗಿತ್ತು. ಅನಂತರ ಮೈಸೂರು ರಾಜ್ಯದಲ್ಲಿ ಲೀನವಾಗಿ ತಾಲ್ಲೂಕಿನ ಕೇಂದ್ರವಾಗಿತ್ತು. ಈಗ ಮಧುಗಿರಿ ತಾಲ್ಲೂಕಿಗೆ ಸೇರಿದ ಹೋಬಳಿಯ ಮುಖ್ಯ ಸ್ಥಳವಾಗಿದೆ. ಇಲ್ಲಿರುವ ಕೋಟೆಗೆ ಜೀರ್ಣೋದ್ಧಾರ ಮಾಡಲಾದವು. ಅಂತ ಎರಡು ಪ್ರವೇಶದ್ವಾರಗಳಲ್ಲಿ ಕಮಾನು. ಗುಮ್ಮಟಾಕಾರದ ಚಾವಣಿ ಮುಂತಾದ ಮುಸ್ಲಿಮ್ ವಾಸ್ತು ಲಕ್ಷಣಗಳು ಪ್ರಧಾನವಾಗಿವೆ. ಕೋಟೆಯ ಒಳಭಾಗದಲ್ಲಿ ವೆಂಕಟರಮಣಸ್ವಾಮಿ. ಮಲ್ಲೇಶ್ವರ ಮತ್ತು ಅಂಜನೇಯ ದೇವಾಲಯಗಳು, ಅರಮನೆ, ಹಾಳಾದ ಮಂಟಪ ಅಥವಾ ಕಾವಲು ಗೃಹ, ನೀರಿನ ದೋಣಿಗಳು, ಮಸೀದಿ, ಮದ್ದಿನ ಉಗ್ರಾಣ, ಧ್ಯಾನ್ಯದ ಕಣಜಗಳು, ಎಣ್ಣೆ ಮತ್ತು ತುಪ್ಪದ ಸಂಗ್ರಹಕ್ಕಾಗಿ ಉಪಯೋಗಿಸುತ್ತಿದ್ದ ಗುಡಾಣಗಳು ಮುಂತಾದವುಗಳ ಅವಶೇಷಗಳಿವೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ